ಮಾನ್ವಿ
ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಒಂದು ತಾಲ್ಲೂಕು ಮತ್ತು ಅದರ ಆಡಳಿತ ಕೇಂದ್ರ. ಪೂರ್ವ ಮತ್ತು ಈಶಾನ್ಯ ದಿಕ್ಕಿನಲ್ಲಿ ರಾಯಚೂರು. ಉತ್ತರದಲ್ಲಿ ದೇವದುರ್ಗ, ಪಶ್ಚಿಮ ಮತ್ತು ವಾಯವ್ಯದಲ್ಲಿ ಲಿಂಗಸುಗೂರು, ನೈಋತ್ಯದಲ್ಲಿ ಸಿಂಧನೂರು ತಾಲ್ಲೂಕುಗಳೂ ದಕ್ಷಿಣದಲ್ಲಿ ಆಂಧ್ರಪ್ರದೇಶವೂ ಸುತ್ತುವರಿದಿವೆ. 171 ಗ್ರಾಮಗಳಿವೆ. ಮಾನ್ವಿ, ಹಿರೇಕೊಟ್ಟನ ಕಲ್ಲು, ಕುರಡಿ, ಕಲ್ಲೂರು, ಸಿರಿವಾರ, ಮಲತ, ಕವಿತಾಳ, ಪಾಮನಕಲ್ಲೂರು ಮತ್ತು ಹಾಲಪುರ ಹೋಬಳಿಗಳು. ತಾಲ್ಲೂಕಿನ ವಿಸ್ತೀರ್ಣ 1,729.2 ಚ.ಕಿ.ಮೀ. ಜನಸಂಖ್ಯೆ 3,30,540 (2001).

ತುಂಗಭದ್ರಾನದಿ ತಾಲ್ಲೂಕಿನ ದಕ್ಷಿಣದಿಂದ ಪೂರ್ವ ಮತ್ತು ಈಶಾನ್ಯ ದಿಕ್ಕಿಗೆ ಹರಿದು ಆಂಧ್ರ ಪ್ರದೇಶದಿಂದ ಮಾನ್ವಿಯನ್ನು ಪ್ರತ್ಯೇಕಿಸಿದೆ. ಮಾನ್ವಿ ಮತ್ತು ಸಿಂಧನೂರು ತಾಲ್ಲೂಕುಗಳ ಮಧ್ಯೆ ತುಂಗಭದ್ರಾನದಿಯನ್ನು ಸೇರುವ ಹೀರೇಹಳ್ಳ ಹರಿಯುತ್ತದೆ. ಇದಲ್ಲದೆ ತಾಲ್ಲೂಕಿನಲ್ಲಿ ಇನ್ನೆರಡು ಹಳ್ಳಗಳು ಹರಿದು ತುಂಗ ಭದ್ರಾ ನದಿಯನ್ನು ಸೇರುತ್ತವೆ. 54 ಕೆರೆಗಳಿವೆ. ಇಲ್ಲಿಯ 128 ಗ್ರಾಮಗಳಿಗೆ ತುಂಗಭದ್ರಾ ಜಲಾಶಯದ ಎಡದಂಡೆನಾಲೆಯ ನೀರು ದೊರೆತು ವ್ಯವಸಾಯ ಅಭಿವೃದ್ಧಿಯಾಗಿದೆ. ಜೋಳ, ದ್ವಿದಳಧಾನ್ಯಗಳು, ನೆಲಗಡಲೆ, ಹತ್ತಿ, ಎಣ್ಣೆಬೀಜಗಳು, ಸಜ್ಜೆ ಮತ್ತು ಬತ್ತ ಬೆಳೆಯುತ್ತಾರೆ.

ಕೈಮಗ್ಗದ ಬಟ್ಟೆಗಳು, ಚರ್ಮ ಮತ್ತು ಮರಗೆಲಸ ಇಲ್ಲಿಯ ಮುಖ್ಯ ಕೈಗಾರಿಕೆಗಳು. ಈ ಉದ್ಯೋಗಗಳಿಗೆ ಪ್ರೋತ್ಸಾಹ ನೀಡಲು ಸಹಕಾರ ಸಂಘಗಳಿವೆ. ಅಲ್ಲದೆ ಹತ್ತಿ ಶುದ್ಧೀಕರಣ ಕಾರ್ಖಾನೆಗಳು ಮತ್ತು ಮರಕೊಯ್ಯುವ ಕಾರ್ಖಾನೆ ಮುಂತಾದವು ಕೂಡ ಇವೆ. ಮಾನ್ವಿ ತಾಲ್ಲೂಕಿನಿಂದ ಸುತ್ತಲ ಪಟ್ಟಣಗಳಿಗೆ ಉತ್ತಮಮಾರ್ಗಗಳಿವೆ. ಇಲ್ಲಿ ವಿದ್ಯುಚ್ಛಕ್ತಿ, ದೂರವಾಣಿ, ಅಂಚೆ ಮುಂತಾದ ಸೌಕರ್ಯಗಳಿವೆ. ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳುಂಟು. ಸರ್ಕಾರಿ, ಸಾರ್ವಜನಿಕ ಔಷಧಾಲಯಗಳಿವೆ. ಈ ತಾಲ್ಲೂಕು ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ಎಲ್ಲೆಯಲ್ಲಿದ್ದು ಎರಡೂ ಕಡೆಯ ಸುತ್ತಲ ಊರುಗಳ ವ್ಯಾಪಾರ ಕೇಂದ್ರವಾಗಿದೆ.
ಈ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಪ್ರಾಗೈತಿಹಾಸಿಕ ಮತ್ತು ಐತಿಹಾಸಿಕ ಕಾಲದ ಅವಶೇಷಗಳಿವೆ. ಕವಿತಾಳವೆಂಬ ಗ್ರಾಮದಲ್ಲಿ ಪ್ರಸಿದ್ಧ ತ್ರ್ಯಂಬಕೇಶ್ವರ ದೇವಾಲಯವಿದ್ದು ಇದರಲ್ಲಿ ಎರಡು ಕನ್ನಡ ಶಾಸನಗಳಿವೆ. ಕೋಟೆಕಲ್ಲು ಗ್ರಾಮದ ಹತ್ತಿರವಿರುವ ಎರಡು ಬೆಟ್ಟಗಳ ಮೇಲೂ ಕೋಟೆ ಇದೆ. ಇಲ್ಲಿ ಇತಿಹಾಸಪೂರ್ವ ಕಾಲದಲ್ಲಿ ಚಿನ್ನದ ಉದ್ಯಮವಿತ್ತು.

ಮಾನ್ವಿ ಹೋಬಳಿ ಮತ್ತು ತಾಲ್ಲೂಕು ಆಡಳಿತಕೇಂದ್ರ. ರಾಯಚೂರಿನ ನೈಋತ್ಯದಲ್ಲಿ 44 ಕಿಮೀ ದೂರದಲ್ಲಿ ರಾಯಚೂರು-ಸಿಂಧನೂರು ಹೆದ್ದಾರಿ ಮಧ್ಯದಲ್ಲಿ ಈ ಪಟ್ಟಣವಿದೆ. ಪಟ್ಟಣ 13 ಚಕಿಮೀ ಇದ್ದು ತುಂಗಭದ್ರಾ ಯೋಜನೆಯ ಕಾರ್ಯಕೇಂದ್ರ ಮತ್ತು ವ್ಯಾಪಾರಾಭಿವೃದ್ಧಿಯೊಂದಿಗೆ ವಿಸ್ತರಿಸುತ್ತಿದೆ. ಜನಸಂಖ್ಯೆ 37,555 (2001). ಪಟ್ಟಣದಲ್ಲಿ ವಿದ್ಯುಚ್ಛಕ್ತಿ, ಅಂಚೆ, ತಂತಿ, ಶಾಲೆಗಳು ಮತ್ತು ವೈದ್ಯಕೀಯ ಸೌಲಭ್ಯಗಳಿವೆ. ಪಟ್ಟಣ ಪುರಸಭಾಡಳಿತಕ್ಕೆ ಸೇರಿದೆ.

ಮಾನ್ವಿಯಲ್ಲಿ ಹಳೆ ಕೋಟೆಯ ಅವಶೇಷಗಳಿವೆ. ಇಲ್ಲಿರುವ 1052ರ ಒಂದು ಶಾಸನ ಮಹಾಮಂಡಲೇಶ್ವರ ದೇವರಸನಿಗೆ ಸೇರಿತ್ತೆಂಬುದನ್ನೂ ಚಾಳುಕ್ಯ ಒಂದನೆಯ ಸೋಮೇಶ್ವರನ ಸೇನಾಪತಿಯಾಗಿದ್ದ ಈತ ಉತ್ತರ ಕೊಂಕಣ ಮತ್ತು ಮಧ್ಯಭಾರತದ ಮೇಲೆ ದಂಡಯಾತ್ರೆ ನಡೆಸಿದ ವಿಷಯವನ್ನೂ ತಿಳಿಸುತ್ತದೆ. ಈ ಸುತ್ತಿನ ಹಿಂದೂಗಳಿಗೆ ಮಾನ್ವಿ ಯಾತ್ರಾಸ್ಥಳ. ಇಲ್ಲಿ ಪ್ರಸಿದ್ಧ ಜಗನ್ನಾಥ ದೇವಾಲಯವಿದೆ. ಇಲ್ಲಿ ಜನವರಿ ತಿಂಗಳಲ್ಲಿ ಮಹಾಮಲ್ಲೇಶಪ್ಪ ಮತ್ತು ಸಂಜೀವರಾಯನ ಜಾತ್ರೆಗಳೂ ಫೆಬ್ರುವರಿ ತಿಂಗಳಲ್ಲಿ ಎಲ್ಲಮ್ಮನ ಜಾತ್ರೆಯೂ ನಡೆಸಯುತ್ತವೆ. ಇದು ಪ್ರಸಿದ್ಧ ಹರಿದಾಸರಾದ ಜಗನಾಥದಾಸರು ಹುಟ್ಟಿದ ಊರು. ವಿದ್ವಾಂಸರಾದ ಮಾನ್ವಿ ನರಸಿಂಗರಾಯರು ಇದೇ ಪಟ್ಟಣದವರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ